ಮಂಗಳೂರು, ಜೂನ್.12 : ಮಂಗಳೂರಿನ ಹೃದಯ ಭಾಗದಲ್ಲಿ ಇರುವ ನವಭಾರತ್ ಸರ್ಕಲ್ (ರಾಷ್ಟ್ರಕವಿ ಗೋವಿಂದ್ ಪೈ ವೃತ್ತ) ನ್ನು ಜೂನ್ 11ರ ಶುಕ್ರವಾರ ರಾತ್ರಿ ಏಕಾಏಕಿ ನೆಲಸಮ ಮಾಡಲಾಗಿದ್ದು ಇದೀಗ ಯೊಂದು ಪತ್ತೆಯಾಗಿದೆ.
ದಶಕಗಳ ಹಿಂದೆ ಮಂಗಳೂರಿನ ಪ್ರಮುಖ ಪತ್ರಿಕೆಯಾಗಿದ್ದ ನವಭಾರತ ಮುದ್ರಣಾಲಯ ಮತ್ತು ಕಚೇರಿ ಇಲ್ಲಿ ಇದ್ದ ಕಾರಣಕ್ಕೆ ಈ ವೃತ್ತವನ್ನು ನವಭಾರತ ಸರ್ಕಲ್ ಎಂದು ಕರೆಯಲಾಗುತ್ತಿತ್ತು. ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಈ ವೃತ್ತವನ್ನು ಕೆಡವಲಾಗಿದೆ.
ಶನಿವಾರ ಕಾಮಗಾರಿ ವೇಳೆ ವೃತ್ತದಲ್ಲಿ ಪುರಾತನ ಬಾವಿ ಪತ್ತೆಯಾಗಿದ್ದು, ಸ್ಥಳಕ್ಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಮಹಾನಗರ ಪಾಲಿಕೆ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶುಕ್ರವಾರ ರಾತ್ರಿ ನವಭಾರತ ವೃತ್ತ ಕೆಡಹುವ ವೇಳೆ ಹಿರಿಯರಾದ ನಗರ ನಾರಾಯಣ ಶೆಣೈ ಅವರು ಈ ಸ್ಥಳದಲ್ಲಿ ಹಿಂದೆ ಬಾವಿ ಇತ್ತು ಎಂದು ತಿಳಿಸಿದ್ದರು.
ಬಾವಿಯನ್ನು ಕಾಂಕ್ರಿಟ್ ಸ್ಲ್ಯಾಬ್ ಹಾಕಿ ಮುಚ್ಚಲಾಗಿತ್ತು. ಕಾಮಗಾರಿ ವೇಳೆ ಮಣ್ಣು ಕುಸಿದು ಬಾವಿ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ. ಬಾವಿಯಲ್ಲಿ ನೀರು ಕಾಣುತ್ತಿದ್ದು, ಬಾವಿಯ ಅಗಲ 12 ಅಡಿ ಇದೆ. ಆಳ ಸುಮಾರು 40 ಅಡಿ ಇರಬಹುದು ಎಂದು ಅಂದಾಜಿಸಲಾಗಿದೆ.
ಬಾವಿಯಲ್ಲಿ ನೀರಿದ್ದು, ಇದು ಕುಡಿಯಲು ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಲು ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸುಮಾರು 1980 ರಲ್ಲಿ ನಿರ್ಮಾಣವಾದ 40 ವರ್ಷದ ಹಿಂದಿನ ಬಾವಿ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು ಇದರ ಇತಿಹಾಸ ಇನ್ನಷ್ಟೇ ತಿಳಿದುಬರಬೇಕಿದೆ.
ಈ ಹಿಂದೆ ಸ್ಮಾರ್ಟ್ ಸಿಟಿ ಕಾಮಗಾರಿಯ ವೇಳೆ ನಗರದ ಹಂಪನಕಟ್ಟೆಯಲ್ಲಿಯೂ ನೂರಾರು ವರ್ಷ ಹಳೆಯದಾದ ಬಾವಿ ಪತ್ತೆಯಾಗಿತ್ತು. ಈ ಬಾವಿಯೂ ‘ಅಪ್ಪಣ್ಣನ ಬಾವಿ’ ಎಂದೇ ಪ್ರಸಿದ್ಧಿ ಪಡೆದಿತ್ತು. ಹಂಪನಕಟ್ಟೆ ಬಾವಿಗೆ ಈಗ ಆವರಣ ಗೋಡೆ ನಿರ್ಮಿಸಿ ಅಂದಗೊಳಿಸಲಾಗಿದೆ.
ವೃತ್ತ ಪುನರ್ ನಿರ್ಮಾಣ ವೇಳೆ ಬಾವಿಯನ್ನು ಉಳಿಸಿಕೊಂಡು ರಿಂಗ್ ಅಳವಡಿಸಿ 1 ಮೀ.ಎತ್ತರಕ್ಕೆ ಆವರಣ ನಿರ್ಮಿಸಲಾಗುವುದು. ಅಗತ್ಯ ಬಿದ್ದರೆ ಈ ಬಾವಿ ನೀರನ್ನು ಉಪಯೋಗಿಸಲಾಗುವುದು’ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.